Friday, July 17, 2009

ಎಸ್.ದಿವಾಕರ್ ಅವರ ಕಥಾ ಜಗತ್ತು

ಕನ್ನಡದ ಮೊದಲ ಪಂಕ್ತಿಯ ಅನುವಾದ ಕೃತಿಗಳಲ್ಲೊಂದಾದ ಎಸ್.ದಿವಾಕರ್ ಅವರ 'ಕಥಾ ಜಗತ್ತು' ಹೊಸ ಆವೃತ್ತಿ ಜುಲೈ 19ರ ಭಾನುವಾರ ಬಿಡುಗಡೆಯಾಗಲಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕ್ರಮ. ದಿವಾಕರ್ ಅವರೊಂದಿಗೆ ಪ್ರೊ. ಎಚ್.ಕೆ.ರಾಮಚಂದ್ರಮೂರ್ತಿ, ಜಯಂತ ಕಾಯ್ಕಿಣಿ ಹಾಗೂ ಎಸ್.ಆರ್.ವಿಜಯಶಂಕರ ಕಾರ್ಯಕ್ರಮದಲ್ಲಿ ಭಾಗವಹಿಸುವರು.'ಕಥಾ ಜಗತ್ತು' ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರರಾದ ಐವತ್ತು ಕಥೆಗಾರರ ಕಥೆಗಳ ಸಂಕಲನ. ಜಗತ್ತಿನ ಅತ್ಯುತ್ತಮ ಕಥೆಗಳನ್ನು ಕನ್ನಡದ ಮೂಲಕ ಕಾಣಿಸುವ ದಿವಾಕರ್ ಅವರ ಕೆಲಸ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಕೃತಿಯ ಬಗ್ಗೆ ಕವಿ ಗೋಪಾಲಕೃಷ್ಣ ಅಡಿಗರು ಅಭಿಪ್ರಾಯವೆಂದರೆ "ಎಸ್.ದಿವಾಕರ್ ಈ ಕಥೆಗಳೆಲ್ಲವನ್ನೂ ಅತ್ಯಂತ ಸಮರ್ಪಕ ರೀತಿಯಲ್ಲಿ, ಮೂಲ ಕಥೆಗಳ ಶ್ರೇಷ್ಠತೆಗೆ ಕುಂದು ಬಾರದ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಥೆಗಳಲ್ಲಿ ಪಾತ್ರ, ಸನ್ನಿವೇಶಗಳನ್ನು ಒತ್ತಟ್ಟಿಗಿಟ್ಟು ನೋಡಿದಲ್ಲಿ, ಇವು ಕನ್ನಡದ್ದೇ ಕಥೆಗಳೋ ಎಂದೆನ್ನಿಸುವಷ್ಟು ಸಹಜವಾಗಿವೆ. ಇದು ಕನ್ನಡಕ್ಕೆ ಅವರು ಸಲ್ಲಿಸುತ್ತಿರುವ ದೊಡ್ಡ ಸೇವೆ ಎನ್ನುವುದರಲ್ಲಿ ಸಂದೇಹವಿಲ್ಲ" ಎಂದು ಮೆಚ್ಚಿಕೊಂಡಿದ್ದರು."ನನ್ನ ಜೀವನದಲ್ಲಿ ಈ ತನಕ ಸಿಕ್ಕಿರುವ ಎಲ್ಲ ಬಹುಮಾನಗಳಿಗಿಂತಲೂ ಅತ್ಯಂತ ದೊಡ್ಡ ಬಹುಮಾನ ಈ ಕಥಾಜಗತ್ತು. ಇಷ್ಟೊಂದು ಕಥೆಗಳ ಅನುವಾದವನ್ನು ಒಬ್ಬರೇ ಮಾಡುವುದೆಂದರೆ ಎಂಟೆದೆ ಬೇಕು. ಇಲ್ಲಿನ ಕಥೆಗಳು ಕನ್ನಡದವೇ ಎಂದು ಭ್ರಮೆ ಹುಟ್ಟಿಸುವಷ್ಟು ಯಶಸ್ಚಿಯಾಗಿದೆ ಅನುವಾದ" ಎನ್ನುವುದು ಕಾದಂಬರಿಕಾರ ಚದುರಂಗರು ವ್ಯಕ್ತಪಡಿಸಿದ್ದ ಮೆಚ್ಚುಗೆ.ಕಥಾಜಗತ್ತು ಕೃತಿಯ ಪ್ರತಿಗಳು ತೀರಿಹೋಗಿ ಬಹುಕಾಲವಿದ್ದರೂ ಎರಡನೇ ಮುದ್ರಣದ ಭಾಗ್ಯ ಕೂಡಿಬಂದಿರಲಿಲ್ಲ. ಬೆಂಗಳೂರಿನ ಸಾಗರ ಪ್ರಕಾಶನ ಇದೀಗ ಕಥಾಜಗತ್ತನ್ನು ಮರಳಿ ಮುದ್ರಿಸಿದೆ. ಮಳೆಯ ದಿನಗಳು; ಕಥೆಗೆ ಒಡ್ಡಿಕೊಳ್ಳಲು ಲಾಯಕ್ಕಾದ ದಿನಗಳು.

No comments:

Post a Comment