Tuesday, June 30, 2009

ಈ ಪತ್ರಿಕೆಯ ಜನ್ಮದಿನ

ಕಾಸರಗೋಡು: ಜುಲೈ 1 ಕನ್ನಡ ಪತ್ರಿಕಾ ದಿನಾಚರಣೆ. ಮಂಗಳೂರಿನಲ್ಲಿ 1843 ಜುಲೈ 1ರಂದು 'ಮಂಗಳೂರು ಸಮಾಚಾರ' ಜನ್ಮತಾಳಿತು. ಇದರ ನೆನಪಿಗೆ ಕನ್ನಡ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ. ಇದೇ ದಿನ ನಮ್ಮ www.kasaragodvartha.com ಎಂಬ ಈ ಪತ್ರಿಕೆ' ನಿಮ್ಮ ಕಣ್ಣ ಮುಂದಿದೆ. ಹಾಗೆ ನೋಡಿದರೆ ಇದು ಅಕ್ಷರಶಃ ಕರಾವಳಿಯ ಹೆಮ್ಮೆ. 'ಮಂಗಳೂರು ಸಮಾಚಾರ' ಪತ್ರಿಕೆಯನ್ನು ಜರ್ಮನಿಯ ಬಾಸೆಲ್ ಮಿಷನ್ನ ರೆವರೆಂಡ್ ಹೆರ್ಮನ್ ಮೊಗ್ಲಿಂಗ್ ಎಂಬವರು ಸ್ಥಾಪಿಸಿದರು. ಅಲ್ಲಿಂದ ಇವತ್ತಿನ ವರೆಗೆ ಪತ್ರಿಕಾ ಲೋಕದ ವಿಕಾಸ, ವಿನ್ಯಾಸ ಕುತೂಹಲಕರ. ಕಾಸರಗೋಡಿನಂಥ ಗಡಿನಾಡು ಕೂಡಾ ಪತ್ರಿಕೋದ್ಯಮದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಒಂದು ಕಾಲದಲ್ಲಿ ಅಚ್ಚಗನ್ನಡದ ನಾಡು ಎಂದೇ ಜನನಿತವಾಗಿದ್ದ ಈ ನೆಲ ಜಾಗತೀಕರಣದ ಭರಾಟೆಯಲ್ಲಿ ಬಹುಭಾಷಾ ಸಂಗಮ ಭೂಮಿಯಾಗಿದೆ. ವೈವಿಧ್ಯ ಸಂಸ್ಕೃತಿ, ಕಲೆ, ಆಚಾರ-ವಿಚಾರ, ಧರ್ಮ-ದೇವರುಗಳ ಬೀಡು ಆಗಿರುವ ಕಾಸರಗೋಡು ವೇಗೋತ್ಕರ್ಷದಲ್ಲಿದೆ.ಮಾಧ್ಯಮ ಕ್ಷೇತ್ರದಲ್ಲಿ ಈ ನೆಲ ತನ್ನ ನೆಲೆಯಲ್ಲಿ ಉಳಿಸಿಕೊಂಡಿದೆ. ಇಲ್ಲಿ ಹತ್ತಾರು ಸಂಜೆ ದೈನಿಕಗಳು ಹುಟ್ಟಿಂದಂತೆ ಬೆಳಗ್ಗಿನ ಪತ್ರಿಕೆ ಯಶಸ್ವಿಯಾಗಿ ಬೇರೂರಿಲ್ಲ.ಆದರೆ ಮುದ್ರಣ ಮಧ್ಯಮಕ್ಕಿಂತ ಭಿನ್ನವಾದ ಸದಾ ನಿರಂತರ ಸುದ್ದಿ ಒದಗಿಸುವ ಆನ್ಲೈನ್ ಪತ್ರಿಕೋದ್ಯಮ ಇಲ್ಲಿ ಬೇರೂರುತ್ತಿದೆ. ಬೇರೂರಿದ ವೇಗದಷ್ಟೇ ಆನ್ಲೈನ್ ಪತ್ರಿಕೆಗಳು ಮುರುಟಿಹೋಗುತ್ತುರುವ ಅಥವಾ ನಿಷ್ಕ್ರಿಯವಾಗಿರುವ ಹಲವಾರು ನಿದರ್ಶನಗಳು ಗಡಿನಾಡಿನಲ್ಲಿ ನಡೆದಿದೆ. ನಡೆಯುತ್ತಿದೆ. ಇವುಗಳಿಗಿಂತ ಭಿನ್ನವಾಗಿ ಕಾಸರಗೋಡಿನಿಂದ ಇತ್ತೀಚೆಗೆ www.kasaragodvartha.com ಎಂಬ ಮಲೆಯಾಳ ವೆಬ್ ಅಥವಾ ಆನ್ ಲೈನ್ ಪತ್ರಿಕೆ ಉಸಿರಾಡುತ್ತಿದೆ. ಇಂಗ್ಲಿಷ್ನಲ್ಲಿಯೂ ಸುದ್ದಿ ಪ್ರಕಟಿಸುತ್ತಿದೆ. ಇದು ಕಾಸರಗೋಡಿನ ಸ್ಥಳೀಯ ಸುದ್ದಿಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನು ಅಪ್ಲೋಡ್ ಮಾಡುತ್ತಿದೆ. ಸುದ್ದಿಗೆ ಮತ್ರ ಸೀಮಿತವಾಗದೆ ವೈವಿಧ್ಯ ವಿಷಯಗಳನ್ನೂ ಒಳಗೊಂಡು www.kasaragodvartha.com ದೇಶ ವಿದೇಶಗಳಲ್ಲಿ ಗಮನ ಸೆಳೆಯುತ್ತಿದೆ. ಇದೀಗ ಅಂದರೆ ಜುಲೈ 1ರಂದು ಕನ್ನಡ ಆವೃತ್ತಿಯನ್ನೂ ಆರಂಭಿಸಲಾಗುತ್ತಿದೆ. ಇದರಿಂದ ಗಡಿನಾಡ ಸುದ್ದಿಗಳು ನೆರೆಯ ಕರ್ನಾಟಕ ಸಹಿತ ದೇಶ-ವಿದೇಶದ ಕನ್ನಡಿಗರಿಗೆ ಬೆರಳ ತುದಿಯಲ್ಲಿ ಕನ್ನಡದಲ್ಲಿ ತಾಜಾ ಸುದ್ದಿಗಳನ್ನು ನಿರೀಕ್ಷಿಸಬಹುದು. ಇದಕ್ಕೆ ಕನ್ನಡಿಗರಾದ ನಿಮ್ಮೆಲ್ಲರ ಸಹಾಯ-ಸಹಕಾರವನ್ನು ಆತ್ಮೀಯತೆಯಿಂದ ಬಯಸುತ್ತೇವೆ. ನಿಮಗೆ ಸ್ವಾಗತ.

ಸುರೇಶ್ ಕೆ. ಎಡನಾಡು.

ಹೊಳೆ ಎಂಬ ಜೀವನದಿಯ ನರಕ

ಕಾಸರಗೋಡು:ಮಂಗಳೂರಿನಿಂದ ತಿರುವನಂತಪುರಕ್ಕೆ ರೈಲಿನಲ್ಲಿ ಸಂಚರಿಸುವ ಯಾತ್ರಿಕ ನಿದ್ದೆ ಮಾಡಿದ್ದರೂ ಕೊಚ್ಚಿಗೆ ತಲುಪಿದಾಗ ಮೂಗು ಮುಚ್ಚಿಕೊಳ್ಳುತ್ತಾ ಎಚ್ಚರವಾದಂತೆ ಕಾಸರಗೋಡಿನ ತಾಲೂಕಿನ ಉಪ್ಪಳ ಸೇತುವೆ ಮೇಲೆ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರೂ ಮೂಗು ಮುಚ್ಚಿಕೊಳ್ಳುತ್ತಾರೆ. ಈ ಉಪ್ಪಳ ಹೊಳೆಯ ಪರಿಚಯ ಇಲ್ಲದವರೂ ಯಾರೂ ಇಲ್ಲ. ಅದರ ವಾಸನೆಯೇ ಅದಕ್ಕೆ ಕಾರಣ. ಹೊಳೆಯನ್ನು ಕಂಡು ಕಣ್ಣೀರು ಸುರಿಸುವವರೇ ಇಲ್ಲ. ಜಿಲ್ಲೆಯ ಎಲ್ಲಾ ನದಿಗಳಿಗೂ ಇದೇ ಪಾಡಾದರೂ ಉಪ್ಪಳದ ನದಿಯ ಕತೆಯೇ ಬೇರೆ. ಅದರ ಸಮೀಪಕ್ಕೆ ಬಂದಂತೆ ಅಸಹ್ಯ ವಾಕರಿಕೆ ಬರುತ್ತದೆ! ಕೇವಲ ಹತ್ತು ವರ್ಷಗಳ ಹಿಂದೆ ನದಿ-ಹೊಳೆಗಳ ಬಗ್ಗೆ ನಮಗಿದ್ದ ಆಕರ್ಷಣೆ, ಅರಿವು ಎಲ್ಲಾ ತಲೆಕೆಳಗಾಗಿದೆ. ಕನ್ನಡಿಯಂಥ ನದಿಯ ನೀರು ನಮ್ಮ ಊಹೆಗೂ ನಿಲುಕದಂತೆ ಕಲುಷಿತಗೊಂಡಿದೆ. ಅಂದು ನೀರಿಗಿಳಿದು ಈಜಾಡುವ ಮಂದಿ ಇಂದು ಹೊಳೆಯ ನೀರಿನಲ್ಲಿ ಕಾಲಿಡಲು ಹೇಸುತ್ತಿದ್ದಾರೆ. ಆಗಿರುವುದೇನು? :ಉಪ್ಪಳ ಮತ್ತು ಹೊಸಂಗಡಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಉಪ್ಪಳ ಹೊಳೆ ಸಿಗುತ್ತದೆ. ಬಸ್ಸು ಮತ್ತಿತರ(ಹವಾನಿಯಂತ್ರಣ ಇಲ್ಲದ) ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರೆ ಹೊಳೆ ಬಂದಾಗ ಎಂಥವನೂ ಮೂಗು ಮುರಿಯುವ ಸನ್ನಿವೇಶ ನಿಮರ್ಾಣವಾಗಿದೆ. ಸಂಜೆಯಾದರೆ ಸಾಕು; 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಉಪ್ಪಳ ಸೇತುವೆಯ ಕೆಳಗಿನ ನೀರಿಗೆ ಧೊಪ್ಪೆಂದು ಪ್ಲಾಸ್ಟಿಕ್ ಗೋಣಿ ಚೀಲಗಳು ಬೀಳುತ್ತದೆ. ಹೊಸಂಗಡಿ, ಉಪ್ಪಳ, ಕೈಕಂಬ ಮೊದಲಾದ ಪೇಟೆಗಳ ಕಸಾಯಿಖಾನೆಯಿಂದ ಮಾಂಸದ ತ್ಯಾಜ್ಯಗಳನ್ನು ಗೋಣಿ ಚೀಲಗಳಲ್ಲಿ ಕಟ್ಟಿ ಆಟೋರಿಕ್ಷಾಗಳಲ್ಲಿ ಕದ್ದು ಮುಚ್ಚಿ ನಿರ್ದಯವಾಗಿ ನದಿಗೆ ಎಸೆಯುವುದು ರೂಢಿಯಾಗಿದೆ. ಕೋಳಿ, ಆಡು, ಕುರಿ ಮತ್ತು ಕೋಣ-ದನಗಳ ಮಾಂಸ ಮಾರಾಟ ಮಾಡಿ ಉಳಿದ ತ್ಯಾಜ್ಯಗಳನ್ನು ಹೀಗೆ ನದಿಗೆ ಸುರಿಯಲಾಗುತ್ತದೆ. ಕೋಳಿಯ ಗರಿಯನ್ನೊಳಗೊಂಡಂತೆ ಆಡು-ಕೋಣ ಮೊದಲಾದವುಗಳ ಚರ್ಮ, ಕರುಳು, ಎಲುಬು ಇತ್ಯಾದಿಗಳನ್ನು ನಿತ್ಯವೂ ನದಿಗೆ ಸುರಿಯುತ್ತಲೇ ಇದ್ದಾರೆ. ಅವೆಲ್ಲ ಗೋಣಿಯೊಳಗೆ ಕೊಳೆತು ಹೋಗುತ್ತದೆ. ಇವುಗಳಿಗೆ ಸದಾ ಹೊಂಚುಹಾಕುವ ನೂರಿನ್ನೂರು ಗಿಡುಗಗಳು ಇವೆ. ಇದರ ಇಮ್ಮಡಿಯಷ್ಟು ಕಾಗೆಗಳೂ ನದಿಯ ಆಸುಪಾಸಿನಲ್ಲಿ ಸುತ್ತಾಡುತ್ತಲೇ ಇರುತ್ತವೆ. ಕೊಳೆತ ಕರುಳು, ಎಲುಬು ಮತ್ತು ಚರ್ಮಗಳನ್ನು ತಮ್ಮ ಕೊಕ್ಕುಗಳಲ್ಲಿ ಎತ್ತಿಕೊಂಡು ಸುಖವಾಗಿ ಹಾರಾಡುವ ಈ ಪಕ್ಷಿಗಳ ಬಾಯಿಂದ ಜಾರಿ ಸಮೀಪದ ಬಾವಿಗಳಿಗೆ ಬೀಳುತ್ತದೆ. ಕೆಲವು ವರ್ಷಗಳಲ್ಲಿ ಈ ವಠಾರದ ಗದ್ದೆ ಮತ್ತು ತೆಂಗಿನ ತೋಟಗಳಂತೂ ಕೋಳಿಯ ಗರಿಗಳಿಂದ ಬಿಳಿ ಬಣ್ಣಕ್ಕೆ ತಿರುಗುವುದುಂಟು. ವಿದ್ಯುತ್ ಕಂಬ, ತೆಂಗಿನ ಕುಬೆ, ಮರ, ಮಾಡುಗಳಲ್ಲಿ ಎಲುಬು-ಕರುಳುಗಳು ಬಿದ್ದು, ಅಲ್ಲಿಯೇ ಕೊಳೆತು, ಒಣಗಿ ವಾಸನೆ ಹೊಡೆಯುತ್ತದೆ.ಸಮುದ್ರದ ಉಬ್ಬರದಿಂದ ನದಿಗೆ ಉಪ್ಪು ನೀರು ಹರಿಯುವುದನ್ನು ತಡೆಯಲು ಸಮೀಪದಲ್ಲಿ ಕಿಂಡಿ ಅಣೆಕಟ್ಟೊಂದನ್ನು ಕಟ್ಟಲಾಗಿದೆ. ಈ ಅಣೆಕಟ್ಟೆಯ ಬುಡದಲ್ಲಿ ಕೊಳೆತ ಮಾಂಸ ಮತ್ತು ರಕ್ತ ಹೆಪ್ಪುಗಟ್ಟಿ ನೋಡುಗರನ್ನು ನಿತ್ರಾಣಗೊಳಿಸುತ್ತದೆ. ಭದ್ರವಾಗಿ ಕಟ್ಟಿದ ಗೋಣಿ ಚೀಲಗಳ ಒಳಗೆ ಮಾಂಸದ ತ್ಯಾಜ್ಯಗಳು ಕೊಳೆತು ಹಪ್ಪಳವಾಗಿದೆ. ಅಣೆಕಟ್ಟಿನ ಉದ್ದಕ್ಕೂ ಇಂಥ ನೂರಾರು ಗೋಣಿಗಳು ಬಿಸಿಲಿಗೆ ಒಣಗಿ ಅಂಟಿ ಕೂತಿದೆ. ಇವುಗಳ ದುವರ್ಾಸನೆಗೆ ರಾತ್ರಿಕಾಲದಲ್ಲಿ ನರಿಗಳು ಮುಗಿ ಬೀಳುತ್ತಿವೆ. ಹೆಬ್ಬಾವುಗಳೂ ಠಿಕಾಣಿ ಹೂಡುತ್ತಿವೆ. ಊರಿನ ಸುಮಾರು 15ಕ್ಕೂ ಮಿಕ್ಕಿದ ನಾಯಿಗಳು ಕೊಳೆತ ಮಾಂಸದ ರುಚಿ ಹಿಡಿದು ಮನೆಯನ್ನು ಮರೆತು ಹೊಳೆಯಲ್ಲಿ ಗುಂಪಾಗಿ ಜೀವನ ಸಾಗಿಸುತ್ತಿವೆ. ಮಧ್ಯಾಹ್ನದ ಹೊತ್ತಿಗೆ ಸಂಚಾರ ಹೊರಡುವ ಈ ನಾಯಿಗಳು ಬಿಸಿಲಿನ ಕಾವು ಕಡಿಮೆಯಾದಾಗ ಹೊಳೆಯಲ್ಲಿ ಸಂಘಜೀವನ ನಡೆಸುತ್ತಿದ್ದು, ಒಬ್ಬಂಟಿಯಾಗಿ ಹೊಳೆಯಲ್ಲಿ ಬರುವ ಮನುಷ್ಯ, ಕರುಗಳ ಮೇಲೆ ಎಗರಿ ಬೀಳುತ್ತಿವೆ. ಸಮೀಪದ ಮನೆಯವರು ಸಾಕುವ ಕೋಳಿಗಳ ಮೇಲೆ ಆಕ್ರಮಣ ಮಾಡುವ ಈ ನಾಯಿಗಳು ಅತ್ಯಂತ ಅಪಾಯಕಾರಿಯಾಗಿ ಬೆಳೆಯುತ್ತಿದೆ.1 ಕಿ.ಮೀ. ದೂರಕ್ಕೂ ಕೊಳೆತು ನಾರುತ್ತಿರುವ ಈ ಹೊಳೆಯಲ್ಲಿ ತೆಪ್ಪದಲ್ಲಿ ಮೀನು ಹಿಡಿಯುವ ಮಂದಿ ಇದ್ದಾರೆ. ಈ ಹೊಳೆಯ ಮೀನನ್ನು ತಿನ್ನುವವರಿಗೆ ಯಾವ ಕೊರತೆಯೂ ಇಲ್ಲ! ಇದೇ ತ್ಯಾಜ್ಯಗಳು ಸಮುದ್ರ ಸೇರಿ ಅಲ್ಲಿನ ಮೀನುಗಳನ್ನು ತಿನ್ನುವವರೂ ಈ ಹೊಳೆಗೊಮ್ಮೆ ಇಳಿದು ನೋಡಬೇಕು.ಹೊಳೆಯ ತೀರದಲ್ಲಿ ಗದ್ದೆ-ತೆಂಗುತೋಟಗಳು ಇದ್ದು, ದುವರ್ಾಸನೆಗೆ ಇಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಊರಲ್ಲಿ ಸಾಕುವ ಕೋಳಿಗಳು ವಿಚಿತ್ರ ರೋಗಗಳಿಗೆ ಬಲಿಯಾಗುತ್ತವೆ. ಆದರೆ ಜನರ ಕ್ಷೇಮದ ಬಗ್ಗೆ ಜನಪ್ರತಿನಿಧಿಗಳಿಗೆ ಯಾವುದೇ ಕಾಳಜಿ ಕಂಡುಬರುತ್ತಿಲ್ಲ ಎಂದು ನಾಗರಿಕರು ನೊಂದು ಹೇಳುತ್ತಾರೆ.ಕಸಾಯಿಖಾನೆಯ ತ್ಯಾಜ್ಯಗಳನ್ನು ತಂದು ನದಿಗೆ ಎಸೆಯುವ ಮಾಂಸದ ವ್ಯಾಪಾರಿಗಳ ವಿರುದ್ಧ ಊರವರು ಪ್ರತಿಭಟಿಸಿದ್ದೂ ಉಂಟು. ಈ ಪ್ರತಿಭಟನೆಗೆ ಗೂಂಡಾಗಿರಿಯ ಪ್ರತಿಕ್ರಿಯೆ ನಾಗರಿಕರಿಗೆ ಸಿಕ್ಕಿದೆ. ಇದು ಶಾಸಕರು, ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ ಪರಿಣಾಮ ಎನ್ನುತ್ತಾರೆ ಸ್ಥಳೀಯರು.ಇದುವರೆಗೂ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಂಚೇಂದ್ರಿಯಗಳು ದುರ್ಬಲವಾಗಿರುವುದರಿಂದ ನದಿ ಮತ್ತು ಜನರ ಕೂಗು ತಟ್ಟುತ್ತಿಲ್ಲ. ಪರಿಸರವಾದಿಗಳು ಸೇತುವೆಯ ಮೇಲೆ ಪ್ರಯಾಣಿಸಿದ ಲಕ್ಷಣಗಳು ಕಂಡುಬಂದಿಲ್ಲ! ನಾಡಿನ ಜೀವ ನದಿಗಳು ಶ್ಮಶಾನಕ್ಕಿಂತಲೂ ಭೀಬತ್ಸವಾದರೆ ಇದಕ್ಕೆ ಯಾರು ಹೊಣೆ? ಪರಿಹಾರ ಕಾಣದ ಈ ಸಮಸ್ಯೆಗೆ ಉಪ್ಪಳ ಹೊಳೆಯ ಎರಡೂ ತೀರದ ಜನರು ಬೇಸತ್ತು ಹೋಗಿದ್ದಾರೆ. ಈ ಜನರ ಸ್ವಂತ ಮಣ್ಣಿನಲ್ಲಿ ಸ್ವಚ್ಛ ಗಾಳಿ ಮತ್ತು ನೀರು ಸೇವಿಸುವ ಹಕ್ಕನ್ನು ಕಸಿದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಕಸಾಯಿಖಾನೆಗಳಿಗೆ ಅನುಮತಿ ನೀಡಿ ಇಂಥ ಸಾಮಾಜಿಕ-ಆರೋಗ್ಯ ಸಮಸ್ಯೆ ಕುರಿತು ಕಣ್ಣಿದ್ದೂ ಕುರುಡರಂತೆ ವತರ್ಿಸುವ ಪಂಚಾಯತು ಅಧಿಕಾರಿಗಳಿಗೆ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸುವ ಜವಾಬ್ದಾರಿಯಿಲ್ಲವೇ? ಇಂದು ವಿಶ್ವ ಪರಿಸರ ದಿನಾಚರಣೆ. ಅತ್ಯಧಿಕ ನದಿಗಳಿರುವ ಕಾಸರಗೋಡು ಜಿಲ್ಲೆಯ ಎಲ್ಲಾ ನದಿಗಳಿಗೂ ಇದೇ ಪಾಡು. ನದಿಯಲ್ಲಿ ಶುದ್ಧ ನೀರು ಹರಿಯಲು ಬಿಡದವರ ವಿರುದ್ಧ ಸಾರ್ವತ್ರಿಕ ಆಂದೋಲನ ಆಗಬೇಕು.
ಸುರೇಶ್ ಕೆ. ಎಡನಾಡು.