Tuesday, June 30, 2009

ಈ ಪತ್ರಿಕೆಯ ಜನ್ಮದಿನ

ಕಾಸರಗೋಡು: ಜುಲೈ 1 ಕನ್ನಡ ಪತ್ರಿಕಾ ದಿನಾಚರಣೆ. ಮಂಗಳೂರಿನಲ್ಲಿ 1843 ಜುಲೈ 1ರಂದು 'ಮಂಗಳೂರು ಸಮಾಚಾರ' ಜನ್ಮತಾಳಿತು. ಇದರ ನೆನಪಿಗೆ ಕನ್ನಡ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದೆ. ಇದೇ ದಿನ ನಮ್ಮ www.kasaragodvartha.com ಎಂಬ ಈ ಪತ್ರಿಕೆ' ನಿಮ್ಮ ಕಣ್ಣ ಮುಂದಿದೆ. ಹಾಗೆ ನೋಡಿದರೆ ಇದು ಅಕ್ಷರಶಃ ಕರಾವಳಿಯ ಹೆಮ್ಮೆ. 'ಮಂಗಳೂರು ಸಮಾಚಾರ' ಪತ್ರಿಕೆಯನ್ನು ಜರ್ಮನಿಯ ಬಾಸೆಲ್ ಮಿಷನ್ನ ರೆವರೆಂಡ್ ಹೆರ್ಮನ್ ಮೊಗ್ಲಿಂಗ್ ಎಂಬವರು ಸ್ಥಾಪಿಸಿದರು. ಅಲ್ಲಿಂದ ಇವತ್ತಿನ ವರೆಗೆ ಪತ್ರಿಕಾ ಲೋಕದ ವಿಕಾಸ, ವಿನ್ಯಾಸ ಕುತೂಹಲಕರ. ಕಾಸರಗೋಡಿನಂಥ ಗಡಿನಾಡು ಕೂಡಾ ಪತ್ರಿಕೋದ್ಯಮದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಒಂದು ಕಾಲದಲ್ಲಿ ಅಚ್ಚಗನ್ನಡದ ನಾಡು ಎಂದೇ ಜನನಿತವಾಗಿದ್ದ ಈ ನೆಲ ಜಾಗತೀಕರಣದ ಭರಾಟೆಯಲ್ಲಿ ಬಹುಭಾಷಾ ಸಂಗಮ ಭೂಮಿಯಾಗಿದೆ. ವೈವಿಧ್ಯ ಸಂಸ್ಕೃತಿ, ಕಲೆ, ಆಚಾರ-ವಿಚಾರ, ಧರ್ಮ-ದೇವರುಗಳ ಬೀಡು ಆಗಿರುವ ಕಾಸರಗೋಡು ವೇಗೋತ್ಕರ್ಷದಲ್ಲಿದೆ.ಮಾಧ್ಯಮ ಕ್ಷೇತ್ರದಲ್ಲಿ ಈ ನೆಲ ತನ್ನ ನೆಲೆಯಲ್ಲಿ ಉಳಿಸಿಕೊಂಡಿದೆ. ಇಲ್ಲಿ ಹತ್ತಾರು ಸಂಜೆ ದೈನಿಕಗಳು ಹುಟ್ಟಿಂದಂತೆ ಬೆಳಗ್ಗಿನ ಪತ್ರಿಕೆ ಯಶಸ್ವಿಯಾಗಿ ಬೇರೂರಿಲ್ಲ.ಆದರೆ ಮುದ್ರಣ ಮಧ್ಯಮಕ್ಕಿಂತ ಭಿನ್ನವಾದ ಸದಾ ನಿರಂತರ ಸುದ್ದಿ ಒದಗಿಸುವ ಆನ್ಲೈನ್ ಪತ್ರಿಕೋದ್ಯಮ ಇಲ್ಲಿ ಬೇರೂರುತ್ತಿದೆ. ಬೇರೂರಿದ ವೇಗದಷ್ಟೇ ಆನ್ಲೈನ್ ಪತ್ರಿಕೆಗಳು ಮುರುಟಿಹೋಗುತ್ತುರುವ ಅಥವಾ ನಿಷ್ಕ್ರಿಯವಾಗಿರುವ ಹಲವಾರು ನಿದರ್ಶನಗಳು ಗಡಿನಾಡಿನಲ್ಲಿ ನಡೆದಿದೆ. ನಡೆಯುತ್ತಿದೆ. ಇವುಗಳಿಗಿಂತ ಭಿನ್ನವಾಗಿ ಕಾಸರಗೋಡಿನಿಂದ ಇತ್ತೀಚೆಗೆ www.kasaragodvartha.com ಎಂಬ ಮಲೆಯಾಳ ವೆಬ್ ಅಥವಾ ಆನ್ ಲೈನ್ ಪತ್ರಿಕೆ ಉಸಿರಾಡುತ್ತಿದೆ. ಇಂಗ್ಲಿಷ್ನಲ್ಲಿಯೂ ಸುದ್ದಿ ಪ್ರಕಟಿಸುತ್ತಿದೆ. ಇದು ಕಾಸರಗೋಡಿನ ಸ್ಥಳೀಯ ಸುದ್ದಿಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನು ಅಪ್ಲೋಡ್ ಮಾಡುತ್ತಿದೆ. ಸುದ್ದಿಗೆ ಮತ್ರ ಸೀಮಿತವಾಗದೆ ವೈವಿಧ್ಯ ವಿಷಯಗಳನ್ನೂ ಒಳಗೊಂಡು www.kasaragodvartha.com ದೇಶ ವಿದೇಶಗಳಲ್ಲಿ ಗಮನ ಸೆಳೆಯುತ್ತಿದೆ. ಇದೀಗ ಅಂದರೆ ಜುಲೈ 1ರಂದು ಕನ್ನಡ ಆವೃತ್ತಿಯನ್ನೂ ಆರಂಭಿಸಲಾಗುತ್ತಿದೆ. ಇದರಿಂದ ಗಡಿನಾಡ ಸುದ್ದಿಗಳು ನೆರೆಯ ಕರ್ನಾಟಕ ಸಹಿತ ದೇಶ-ವಿದೇಶದ ಕನ್ನಡಿಗರಿಗೆ ಬೆರಳ ತುದಿಯಲ್ಲಿ ಕನ್ನಡದಲ್ಲಿ ತಾಜಾ ಸುದ್ದಿಗಳನ್ನು ನಿರೀಕ್ಷಿಸಬಹುದು. ಇದಕ್ಕೆ ಕನ್ನಡಿಗರಾದ ನಿಮ್ಮೆಲ್ಲರ ಸಹಾಯ-ಸಹಕಾರವನ್ನು ಆತ್ಮೀಯತೆಯಿಂದ ಬಯಸುತ್ತೇವೆ. ನಿಮಗೆ ಸ್ವಾಗತ.

ಸುರೇಶ್ ಕೆ. ಎಡನಾಡು.

No comments:

Post a Comment